ಬೆದ್ರಡಿ(ಕನ್ಯಾನ) ವೆಂಕಟರಮಣ ಭಟ್ಟ(1883 - 28/06/1953[೧]) ವಿರಚಿತ ಯಕ್ಷಗಾನ ಪ್ರಸಂಗ: ಸತ್ಯನಾರಾಯಣ ವ್ರತ ಮಹಾತ್ಮೆಯ ಅಪ್ರಕಟಿತ ಹಸ್ತಪ್ರತಿಯ ಸ್ಕಾನ್ ಪ್ರತಿ ಈಗ ಪ್ರಸಂಗ ಪ್ರತಿ ಸಂಗ್ರಹದಲ್ಲಿ ಲಭ್ಯ

ಭಗವದನುಗ್ರಕ್ಕೆ ಭಾವುಕರು ಭಕ್ತಿಯಿಂದ ಆರಾಧಿಸುವ ಶ್ರೀಸತ್ಯನಾರಾಯಣ ವ್ರತವನ್ನು ಆಚರಿಸುವುದು ಸರ್ವವಿದಿತ. ಜನಮನದಲ್ಲಿ ಮಾನಮನ್ನಣೆಯನ್ನು ಪಡೆದು ನಿತ್ಯನೂತನವಾಗಿರುವ ಭಕ್ತಿಪ್ರಧಾನವಾದ ಕಥಾನಕ ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ ಅಥವಾ ಸತ್ಯನಾರಾಯಣ ಚರಿತೆ. ಸ್ಕಂದಪುರಾಣದಲ್ಲಿ ಇದೆಯೆನ್ನಲಾದ, ವ್ರತಕಥೆಯ ರೂಪದಲ್ಲಿನ ಚರಿತವನ್ನು ಯಕ್ಷಗಾನೀಯವಾಗಿ ಅತ್ಯಂತ ಸಮರ್ಥವಾಗಿ ನಮ್ಮ ಮುಂದೆ ಯಕ್ಷಕಾವ್ಯವಾಗಿ ಇಟ್ಟವರು ಕೀರ್ತಿಶೇಷ. ಕನ್ಯಾನ ವೆಂಕಟರಮಣ ಭಟ್ಟರು.

ಅತ್ಯಂತ ಜನಪ್ರಿಯವಾಗಿರುವ ಭಸ್ಮಾಸುರಮೋಹಿನೀ ಎಂಬ ಪ್ರಸಂಗಕತೃವಾದ ಇವರು , ಸತ್ಯನಾರಾಯಣ ಚರಿತ್ರೆಯನ್ನು ಯಕ್ಷಗಾನ ಪ್ರಸಂಗಕ್ಕೆ ಆಗುವಂತೆ ರಚಿಸಿರುವುದು ಇವರ ಕೌಶಲ. ಬಹಳ ವಿಶೇಷವಾದ ಪದಪ್ರಯೋಗಗಳಿಂದಲೂ, ವಿಶಿಷ್ಟ ಮಟ್ಟುಗಳ ಬಂಧಗಳಿಂದಲೂ,ಯಕ್ಷಗಾನದ ನಡೆಗೆ ಧಕ್ಕೆಬರದಂತೆ ಕಥಾವಸ್ತುವನ್ನು ಸಂಕಲಿಸಿ ಮಾಡಿದ ರಚನೆಯಿದಾಗಿದೆ.


ಮೂಲಕಥೆಯಲ್ಲಿ ಬರುವಂತೆ ಕಾಶೀಕ್ಷೇತ್ರದ ಬಡಬ್ರಾಹ್ಮಣನ ಕಥೆಯನ್ನು ಮೊದಲಿಗೆ ತರದೇ, ಉಲ್ಕಮುಖ ರಾಜನ ಒಡ್ಡೋಲಗದಿಂದ ಕಥೆ ಪ್ರಾರಂಭಿಸಿರುವುದು ಇವರ ರಂಗನಿರ್ದೇಶನಕ್ಕೆ ಹಿಡಿದ ಕೈಗನ್ನಡಿ. ಯಕ್ಷಗಾನರಂಗ ಅಪೇಕ್ಷಿಸುವ ಕಿರಾತವೇಷ, ಬೇಟೆಯ ಸನ್ನಿವೇಶ, ವನವರ್ಣನೆ ಮೊದಲಾದ ಪ್ರಸ್ತುತಗಳೂ ಇಲ್ಲಿದ್ದು,ಸಾಹಿತ್ಯ ಸಮೃದ್ಧವಾಗಿದೆ.


ಬಟ್ಯಡ್ಕ ರಾಮಭಟ್ಟರಿಂದ ದೊರಕಿದ ಹಸ್ತಪ್ರತಿ ಅಮೂಲ್ಯವಾಗಿದ್ದು ,ನಮ್ಮ ಪ್ರತಿಸಂಗ್ರಹಕ್ಕೆ ಸೇರಿರುವುದು ಹೆಗ್ಗಳಿಕೆಯೇ ಸರಿ.


ಸಾಹಿತ್ಯಾಸಕ್ತರು  ಇಂತಹಾ  ಅಪೂರ್ವ ಪ್ರಸಂಗಸಾಹಿತ್ಯವನ್ನು ಅವಲೋಕಿಸಬಹುದಾಗಿದೆ.

- ಅಜಿತ್ ಕಾರಂತ
ಸಂಪಾದಕರು (ಯಕ್ಷ ಮಟ್ಟುಕೋಶ, ಯಕ್ಷವಾಹಿನಿ)

 


1964 ರಲ್ಲಿ ಪ್ರತಿ ಮಾಡಿದ ಹಸ್ತಪ್ರತಿ ಇದಾಗಿದೆ ಎಂದು ಪುಸ್ತಕದ ಕೊನೆಯ ಪುಟದಲ್ಲಿ ನಮೂದಿತವಾಗಿದೆ, ಡಾ| ಉಪ್ಪಂಗಳರ ತೆಂಕನಾಡ ಯಕ್ಷಗಾನ ಪುಸ್ತಕದಲ್ಲಿ ಕವಿ ಬೆದ್ರಡಿಯವರ ಸಹೋದರ ಶಂಕರ ಭಟ್ಟರ ಮಗನ ಮನೆಯಲ್ಲಿ ಹಸ್ತಪ್ರತಿಯಿದೆ ಎಂಬ ಮಾಹಿತಿಯಿದೆ, ಶಂಕರ ಭಟ್ಟರ ಮಗ ರಾಮ ಭಟ್ಟರು ಈಗ ದಿವಂಗತರು, ಅವರ ಪುತ್ರ ಶ್ರೀ ಉದಯ ಶಂಕರ ಭಟ್ಟರ ಮನೆಗೆ ಪ್ರಸಂಗ ಪ್ರತಿಗಳ ಹುಡುಕಾಟ ಮತ್ತು ಸೌಹಾರ್ದ ಭೇಟಿ ನೀಡಿದಾಗ ಈ ಅಪ್ರಕಟಿತ ಹಸ್ತಪ್ರತಿ ಪ್ರಾಪ್ತವಾಯಿತು. ಆಮೇಲೆ ನಮ್ಮ ಪ್ರಸಂಗ ಕೋಶದ ಮುಖ್ಯ ನಿರ್ದೇಶಕರಾದ ಶ್ರೀ ಶ್ರೀಧರ ಡಿ. ಎಸ್. ಅವರ ಜತೆ ಚರ್ಚಿಸಿ ಮಾಹಿತಿಗಳನ್ನು ತಾಳೆ ಹಾಕಿದಾಗ ಇದು ಕವಿ ಬೆದ್ರಡಿ ವೆಂಕಟರಮಣ ಭಟ್ಟರ ಅಪ್ರಕಟಿತ ಪ್ರತಿ ಎಂಬುದು ತಿಳಿದುಬಂತು.

ಇದುವರೆಗೆ ಸಾರ್ವತ್ರಿಕವಾಗಿ ಲಭ್ಯವಿರದಿದ್ದ ಈ ಕೃತಿಯನ್ನು ಯಕ್ಷವಾಹಿನಿಯ ಪ್ರಸಂಗ ಪ್ರತಿ ಸಂಗ್ರಹದ ಮೂಲಕ ಅನಾವರಣಗೊಳಿಸುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಷಯವಾಗಿದೆ.

ಈ ಪ್ರಸಂಗದ ಕೊನೆಗೆ ಕವಿ ಈ ರೀತಿ ತಮ್ಮ ಪರಿಚಯವನ್ನು ತಿಳಿಸಿದ್ದಾರೆ

ವಾರ್ಧಿಕ
ಮೂರುಲೋಕಕೆ ಪೂಜ್ಯಮಾಗಿ ತೋರುವ ಸತ್ಯ|
ನಾರಾಯಣನ ಕತೆಯ ಗೆಯ್ದ ತಿರುಪತಿ ನಾಮ|
ಧಾರಕಂ ತಾನು ಭೂಸುರನು ವಾಸಿಷ್ಟ ಗೋತ್ರದೊಳು ಪುಟ್ಟಿರುವೆ ಜಗದಿ||
ಶಾರದೆಯ ದಿನನಿತ್ಯದೊಳಗಾನು ಬೇಡುತ್ತ|
ಶ್ರೀರಮಾಧವನನ್ನು ಸನ್ನುತಿಸಿ ಪಾಡುತ್ತ|
ಮೂರಂಬ ಗೊಂದಿಸುತ ಧರೆಯೊಳಿಹ ಸಜ್ಜನರ ಕೊಂಡಾಡುವೆನು ಭಕ್ತಿಲಿ||  


ಕವಿ ಪರಿಚಯ: ಯಕ್ಷವಾಹಿನಿ (ಯಕ್ಷಪ್ರಸಂಗ ಕೋಶ) ಪ್ರಕಾಶಿತ ಕೊಲ್ಲೂರು ಕ್ಷೇತ್ರ ಮಹಾತ್ಮೆ ಪ್ರಸಂಗ ಪುಸ್ತಕದಿಂದ

 


(ಶ್ರೀ) ಸತ್ಯನಾರಾಯಣ ವ್ರತ ಮಹಾತ್ಮೆ ಪ್ರಸಂಗಗಳು, ಪ್ರಸಂಗ ಪಟ್ಟಿಯಿಂದ

    ಪ್ರಸಂಗ ಮತ್ತು ಕವಿ


ಉಲ್ಲೇಖ:

[೧]ಡಾ| ಉಪ್ಪಂಗಳ ಶಂಕರನಾರಾಯಣ ಭಟ್ಟರ ತೆಂಕನಾಡ ಯಕ್ಷಗಾನ

ಕೊಂಡಿಯಿಂದ ಸತ್ಯನಾರಾಯಣ ವ್ರತ ಮಹಾತ್ಮೆ ಪ್ರಸಂಗ ಪುಸ್ತಕದ ಪ್ರತಿಯನ್ನು ಪಡೆದುಕೊಳ್ಳಬಹುದು

ಅಥವಾ ಈ ಕೆಳಗಿನ ಗವಾಕ್ಷಿಯ ಮೂಲಕ ಕಾಣುವ ಪ್ರಸಂಗ ಪುಸ್ತಕವನ್ನು ಓದಬಹುದು


ಪ್ರಸಂಗ ಪ್ರತಿ ಸಂಗ್ರಹ ತಂಡ
ಯಕ್ಷವಾಹಿನಿ(ರಿ)

Share:

No comments:

Post a Comment

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ