ಪ್ರಸಂಗಪ್ರತಿಸಂಗ್ರಹದ ಮೊದಲ ಹೆಜ್ಜೆಯ ಲೋಕಾರ್ಪಣೆ!


ಮಾನ್ಯರೇ,

ಪ್ರಸಂಗಪ್ರತಿಸಂಗ್ರಹದ ಲೋಕಾರ್ಪಣವಾಗುತ್ತಿದೆ. ಸುಮಾರು ೪೫೦ ಪ್ರತಿಗಳು ಸೇರಿದ ಈ ಕಣಜವು ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತದೆ.  ಈ ಕೆಳಗೆ ಕೊಟ್ಟ ಕೊಂಡಿಯನ್ನು ಒತ್ತಿದಾಗ ಅತೀ ಇತ್ತೀಚಿನ ಸಂಗ್ರಹದ ಕೋಷ್ಟಕವು ಅನಾವರಣಗೊಳ್ಳುತ್ತದೆ. ಮೇಲೆ ದೊಡ್ಡ ಅಕ್ಷರಗಳಲ್ಲಿ ತೋರಿಸಿದ ಒಟ್ಟು ಪ್ರತಿಗಳ ಸಂಖ್ಯೆಯು ನೀವು ಹಿಂದೆ ನೋಡಿರುವ ಆವೃತ್ತಿಗಿಂತ ಈ ಸಂಗ್ರಹವು ಎಷ್ಟು ಬೆಳೆದಿದೆ ಎಂಬುದರ ಅಂದಾಜನ್ನು ನಿಮಗೆ ಕೊಡುತ್ತದೆ.


ಈ ಯೋಜನೆಯು ಯಕ್ಷಪ್ರಸಂಗಕೋಶ ಯೋಜನೆಗಿಂತ ಭಿನ್ನ. ಯಕ್ಷಪ್ರಸಂಗಕೋಶದಲ್ಲಿ ನಮ್ಮ ಸ್ವಯಂಸೇವಕರು ಹಿಂದಿನ ಪ್ರಕಾಶನಗಳಲ್ಲಿದ್ದ ಸಾಹಿತ್ಯವನ್ನು ವಿದ್ಯುನ್ಮಾನ ಪ್ರತಿಗಳನ್ನಾಗಿ ಪರಿವರ್ತಿಸಿ, ಆ ನಂತರ ನಮ್ಮೊಂದಿಗಿರುವ  ಯಕ್ಷಗಾನ ಸಾಹಿತ್ಯದ ತಜ್ಞರು ಪದಗಳನ್ನು ಕೂಲಂಕಷವಾಗಿ ಪರೀಕ್ಷಿಸಿ, ಮೂಲ ಕವಿಯ ಆಶಯಕ್ಕೆ ಧಕ್ಕೆ ಬಾರದಂತೆ ಸೇರಿಹೋದ ತಪ್ಪುಗಳನ್ನೂ ತಿದ್ದಿ ಪರಿಷ್ಕರಿಸಿದ ನಂತರವೇ ಅಂತರಜಾಲ ಪ್ರಕಾಶನವಾಗಿ ಹೊರಡುತ್ತವೆ. ಹಕ್ಕುಸ್ವಾಮ್ಯ ಇದ್ದಲ್ಲಿ, ಮೂಲ ಲೇಖಕರ ಪೂರ್ವ ಅನುಮತಿಯಲ್ಲೇ, ಅವರ ಹಕ್ಕುಸ್ವಾಮ್ಯ ಹಾಗೆಯೇ ಇರುವಂತೆ, ಉಚಿತ ಸಾರ್ವಜನಿಕ ಪ್ರಸಾರಕ್ಕಾಗಿ ಈ ಅಂತರಜಾಲ ಪ್ರಕಾಶನಗಳು ಪ್ರಕಟಿತವಾಗುತ್ತಿವೆ.

ಪ್ರಸಂಗಪ್ರತಿಸಂಗ್ರಹವು ಯಕ್ಷಪ್ರಸಂಗಕೋಶಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಇಲ್ಲಿ ನಮಗೆ ಸಿಕ್ಕ ಎಲ್ಲಾ ಹಿಂದಿನ ಪ್ರಸಂಗ ಪ್ರಕಾಶನಗಳ ಯಾ ಹಸ್ತಪ್ರತಿಗಳ ಪುಟಗಳನ್ನು ಸ್ಕ್ಯಾನ್‌ ಮಾಡಿ, ಒಂದು ಪಿಡಿಎಫ್‌ ದಸ್ತಾವೇಜನ್ನಾಗಿ ಮಾರ್ಪಡಿಸಿ, ನಮ್ಮ  ಪ್ರಸಂಗಪ್ರತಿಸಂಗ್ರಹದ ಕಣಜಕ್ಕೆ ಸೇರಿಸಿ, ಆ ಪ್ರತಿಗಳನ್ನು ಇಳಿಸಿಕೊಳ್ಳಲು ಕೊಂಡಿಗಳನ್ನು ಪ್ರಸಂಗ, ಕವಿ, ಪ್ರಕಾಶನ ಈ ಮೂರೂ ಮಾಹಿತಿ ಸೇರಿದ ಅನುಕ್ರಮಣಿಕೆಯಲ್ಲಿ ಒಂದು ಕೋಷ್ಟಕದಲ್ಲಿ ಸೇರಿಸಿ, ಆ ಕೋಷ್ಟಕವನ್ನು ತೆರೆದು ಇಳಿಸಿಕೊಳ್ಳಲು ಮೇಲಿನ ಕೊಂಡಿಯನ್ನು ಕೊಟ್ಟಿದ್ದೇವೆ. ಪ್ರಸಂಗ ಪ್ರತಿಗೆ ಸಂಬಂಧಿಸಿದ ಪ್ರಸಂಗವು ಈಗಾಗಲೇ ಯಕ್ಷಪ್ರಸಂಗಕೋಶದಲ್ಲಿ ಬಂದಿದ್ದರೆ, ಯಕ್ಷಪ್ರಸಂಗಕೋಶದ ಆವೃತ್ತಿಗಾಗಿ ಬೇರೆಯೇ ಕಾಲಮ್ಮನ್ನು (ಕಾಲಂ ೫) ಮುಡಿಪಾಗಿಸಿಟ್ಟು, ಸ್ಕ್ಯಾನ್‌ ಮಾಡಿದ ಪ್ರಸಂಗಪ್ರತಿಯ ಕೊಂಡಿಯನ್ನು ಕಾಲಂ ೭ರಲ್ಲಿ ಕೊಟ್ಟಿದ್ದೇವೆ.

ಸುಮಾರು ೮,೦೦೦ ಯಕ್ಷಗಾನ ಪ್ರಸಂಗಗಳು ಬರೆದು ಹೋಗಿರುವ ಅಖಿಲ ಕರ್ನಾಟಕದ ಸಮಗ್ರ (ಅಂದರೆ ಎಲ್ಲಾ ಪಾಯಗಳೂ ಸೇರಿ) ಯಕ್ಷಗಾನ ಸಾಹಿತ್ಯದಲ್ಲಿ ಸುಮಾರು ಅರ್ಧದಷ್ಟು ಸಂಗ್ರಹವಿಲ್ಲದೇ ಯಾ ಸಂಗ್ರಹದ ಮಾಹಿತಿ ಇಲ್ಲದೇ ನಶಿಸಿಹೋಗಿರುವ ಸಾಧ್ಯತೆಗಳಿವೆ. ಉಳಿದ ಸುಮಾರು ೪,೦೦೦ ಪ್ರಸಂಗಗಳು ಬೇರೆ ಬೇರೆ ಸಂಗ್ರಹಗಳಲ್ಲಿ ಚದುರಿ ಹೋಗಿ, ಎಲ್ಲವೂ ಒಂದೇ ಕಡೆ ಸಿಗುವುದು ಕಷ್ಟವಾಗಿರುವುದರಿಂದ, ಒಂದೇ ಸಂಗ್ರಹದಿಂದ ವಿದ್ಯುನ್ಮಾನ ಪ್ರತಿಗಳನ್ನಾಗಿ (ಸ್ಕ್ಯಾನ್‌ ಪ್ರತಿಗಳನ್ನಾಗಿ) ಕೊಡುತ್ತಾ ಹೋಗುವುದಲ್ಲದೇ, ವಿದ್ಯುನ್ಮಾನ ಪ್ರತಿಗಳ ರೂಪದಲ್ಲಿ ಉಳಿದು ಹೋಗಿರುವುಗಳನ್ನು ಕಾಲಗರ್ಭದಲ್ಲಿ ನಶಿಸಿಹೋಗದಂತೆ ಕಾಪಿಡುವುದೇ ಇಲ್ಲಿ ನಮ್ಮ ಗುರಿ.

ಎಂದಿನಂತೆ ಉಚಿತ ಪ್ರಸಾರವೇ ನಮ್ಮ ಧ್ಯೇಯ, ಇವುಗಳ ಮೇಲೆ ನಮ್ಮ ಹಕ್ಕು ಸ್ವಾಮ್ಯ ಇಲ್ಲದೇ ಮೂಲ ಹಕ್ಕುಸ್ವಾಮ್ಯಗಳು ಹಾಗೆಯೇ ಉಳಿಯುತ್ತವೆ. ಆದುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಾವು ಸಮಕಾಲೀನ ಕವಿಗಳ ವಿಷಯವಾಗಿ ಪೂರ್ವ ಅನುಮತಿ ಪಡೆಯುತ್ತಾ ಹೋಗುತ್ತಿದ್ದೇವೆ. ಯಾವುದೇ ಕಾರಣಕ್ಕೆ, ಮೂಲ ಹಕ್ಕುದಾರರ ಹಿತಕ್ಕೆ ವಿರುದ್ದವಾಗಿ ಈ ಪ್ರತಿಗಳ ದುರುಪಯೋಗ ಸಲ್ಲದು. ಗೊಂದಲವಿದ್ದಲ್ಲಿ, ಮೂಲ ಕವಿಗಳನ್ನು ಯಾ ಪ್ರಕಾಶಕರನ್ನು ನೇರವಾಗಿ ಸಂಪರ್ಕಿಸಿರಿ.
ತಮ್ಮ ಅಮೂಲ್ಯವಾದ ಕೃತಿಗಳ ವಿದ್ಯುನ್ಮಾನ ಪ್ರತಿಗಳನ್ನು ಇಲ್ಲಿ ಉಚಿತ ಪ್ರಸಾರಕ್ಕೆ ಎಡೆ ಮಾಡಿಕೊಟ್ಟ ಎಲ್ಲಾ ಕವಿಗಳಿಗೂ ಹಾಗೂ ಮೂಲ ಪ್ರಕಾಶಕರಿಗೂ ಅನಂತ ಧನ್ಯವಾದಗಳು. ಈ ಸಂಗ್ರಹವು ಇನ್ನು ಮುಂದೆ ಯಕ್ಷಗಾನದ ಕುರಿತಾದ ಅರಿವು, ಅಧ್ಯಯನ, ಸಂಶೋಧನೆ, ಪ್ರಸಾರ, ಸೃಜನಶೀಲತೆ, ಸುಧಾರಣೆ, ಆವಿಷ್ಕಾರ ಇತ್ಯಾದಿಗಳನ್ನು ಹೆಚ್ಚಿಸಲು ಸಹಕರಿಸಲಿದೆ ಎಂದು ನಂಬಿದ್ದೇವೆ. ಕ್ರಮೇಣ ಕನ್ನಡ ಸಾಹಿತ್ಯ ವಲಯದಲ್ಲಿ ಯಕ್ಷಗಾನ ಸಾಹಿತ್ಯಕ್ಕೂ ಬರಬೇಕಾದ ಮನ್ನಣೆಯೂ ಬರಲಿದೆ ಎಂದು ಆಶಿಸುತ್ತೇವೆ.

ಸುಧಾರಣೆಯ ಕುರಿತಾಗಿ ಕೆಲವನ್ನು ಉದಾಹರಿಸುವುದಾದರೆ,ಯಕ್ಷಗಾನ ಪ್ರಯೋಗಗಳ ಕುರಿತಾದ ಕರಪತ್ರ ಮತ್ತು ನಿರೂಪಣೆಗಳಲ್ಲಿ ಪ್ರಸಂಗ ಕವಿಯನ್ನು ನೆನೆಯುವ ಶಿಷ್ಟಾಚಾರ ಸರ್ವೇ ಸಾಮಾನ್ಯವಾಗಬೇಕಾಗಿದೆ. ಇಷ್ಟು ದಿನ ಪ್ರಸಂಗದ ಕವಿ ಯಾರು ಎಂಬ ಗೊಂದಲವಿದ್ದುದು ಸಹಜವೇ. ಆದರೆ ಇನ್ನು ಮುಂದೆ ಪ್ರಸಂಗಪ್ರತಿಯಲ್ಲಿ ಕವಿಯ ಹೆಸರು ಇಲ್ಲದಿದ್ದರೂ ಈ ಸಂಗ್ರಹದ ಮಾಹಿತಿಯ ಮೂಲಕ ಕವಿಯ ನಿರ್ದಿಷ್ಟತೆ ಕೈವಶವಾಗಿ ಕವಿಯ ಹೆಸರನ್ನು ನಮೂದಿಸಿ ಆ ಮೂಲಕ ಯಕ್ಷಗಾನ ಪ್ರಸಂಗ ಕವಿಗಳಿಗೆ ಯಕ್ಷಗಾನ ವಲಯದಲ್ಲೇ ಕುಸಿಯುತ್ತಿರುವ ಮನ್ನಣೆಯು ಹೆಚ್ಚಲಿದೆ ಎಂದು ನಂಬುತ್ತೇವೆ. ಹಾಗೆಯೇ, ಒಬ್ಬ ಸಮಕಾಲೀನ ಕವಿಯ ಪ್ರಸಂಗವೊಂದರ ರಂಗ ಪ್ರಯೋಗವಾಗುವಾಗ, ಸಂಬಂಧಿತ ಕವಿಗೂ ಕಿಂಚಿತ್‌ ಯಥಾಶಕ್ತಿ  ಗೌರವಧನದ ರವಾನೆಯೂ ಆಗಲಿ ಎಂದೂ ಆಶಿಸುತ್ತೇವೆ. (ಡಿಜಿಟಲ್‌ ಕರೆನ್ಸಿಯ ಈ ದಿನಗಳಲ್ಲಿ ಕವಿಯ ದೂರವಾಣಿಯ ನಂಬರಿನ ಆಧಾರದಲ್ಲೇ ಅವರಿಗೆ ಕೆಲವೇ ಬಟನ್ನುಗಳನ್ನು ಒತ್ತಿ ಹಣ ಸಂದಾಯ ಮಾಡುವುದು ಸುಲಭವಾಗಿದೆ.), ಈ ಕುರಿತಾಗಿ ಶೀಘ್ರದಲ್ಲೇ ಸಮಕಾಲೀನ ಕವಿಗಳ ಸಂಪರ್ಕಯಾದಿಯನ್ನು ಅಂತರಜಾಲದಲ್ಲಿ ಕೊಡುವ ತುಡಿತ ನಮ್ಮದಾಗಿದೆ.   

ಎಲ್ಲಾ ರೀತಿಯ ಹಿರಿಯ ಮತ್ತು ಕಿರಿಯ ಯಕ್ಷಪ್ರೇಮಿಗಳ ಸ್ವಯಂಸೇವೆಯಲ್ಲೇ ಇಲ್ಲಿನ ಕೆಲಸಗಳು ನಡೆಯುತ್ತಿವೆ. ಈ ಯೋಜನೆಯ ಹಿಂದಿನ ವ್ಯಕ್ತಿಗಳ ಹೆಸರಿನ ಪಟ್ಟಿಯನ್ನು ಮೇಲಿನ ಕೊಂಡಿಯಲ್ಲಿರುವ ಕೋಷ್ಟಕದಲ್ಲಿ ಕೊಟ್ಟಿದ್ದೇವೆ. ಈ ಪಟ್ಟಿಯು ಮುಂದಿನ ದಿನಗಳಲ್ಲಿ ಲಂಕೆಯ ಹನುಮಂತನ ಬಾಲದಂತೆ ಬೆಳೆಯಲಿ ಎಂಬುದೇ ನಮ್ಮ ಆಸೆ.
ಈ ಯೋಜನೆಗೆ ನೀವು ಯಾವ ರೀತಿಯಲ್ಲೂ ಸಹಕರಿಸಬಹುದು.

೧. ನಮ್ಮ ಸಂಗ್ರಹದಲ್ಲಿ ಇನ್ನೂ ಬಂದಿರದ ಪ್ರಸಂಗಪ್ರತಿಗಳ ಬಗ್ಗೆ ತಿಳಿಸಿ. ಅಪ್ರಕಟಿತ ಪ್ರತಿಗಳ ಹಸ್ತಪ್ರತಿಗಳನ್ನೂ ಇಲ್ಲಿ ವಿದ್ಯುನ್ಮಾನ ಪ್ರತಿಗಳನ್ನಾಗಿ ಸೇರಿಸಲು ಅವಕಾಶವಿದೆ.

೨. ಪ್ರಸಂಗಪ್ರತಿಗಳನ್ನು ಸ್ಕ್ಯಾನ್‌ ಮಾಡಿ, ಪಿಡಿಎಫ್‌ ಪ್ರತಿ ಮಾಡಿ, prasangaprathisangraha@gmail.comಗೆ ಕಳುಹಿಸಿ ನಮಗೆ ತಿಳಿಸಿ. ( ಬರೇ ಸ್ಕ್ಯಾನ್‌ ಮಾಡಿಕೊಡುವ ಸ್ವಯಂಸೇವಕರು ಎಲ್ಲೆಡೆ ಸಿಕ್ಕರೆ ಅವರನ್ನು ಆಯಾ ಪ್ರದೇಶದ ಪ್ರಸಂಗ ಪ್ರತಿ ಸಂಗ್ರಾಹಕರತ್ತ ನಾವು ಕಳುಹಿಸಿ ಸಂಗ್ರಾಹಕರ ಮೇಲಿನ ಕೆಲಸದ ಒತ್ತಡವನ್ನು ಸಾಕಷ್ಟು ಇಳಿಸಬಹುದಾಗಿದೆ.)

೩. ನಮ್ಮಲ್ಲಿ ಇಲ್ಲದ ಪ್ರಸಂಗಪ್ರತಿಗಳನ್ನು ಸೇರಿಸುವತ್ತ ಸಂಬಂಧಿಸಿದ ಕವಿ ಯಾ ಪ್ರಕಾಶಕರ ಒಪ್ಪಿಗೆಯನ್ನು ಕೊಡಿಸಿ ಇಲ್ಲವೇ ನಾವು ಮಾತನಾಡಿಸಿ ಪಡೆಯುವತ್ತ ಸಂಪರ್ಕ ವಿವರವನ್ನು ಕೊಡಿ.

೪. ಈ ಪ್ರಸಂಗಪ್ರತಿಸಂಗ್ರಹದ ಅರಿವು, ಪ್ರಸಾರ, ಬಳಕೆಯ ಕುರಿತಾಗಿ ಸಹಕರಿಸಿ.

೫. ನಮ್ಮ ಸಂಗ್ರಹದಲ್ಲಿ ನುಸುಳಿರುವ ಅಪೂರ್ಣತೆ, ತಪ್ಪುಗಳ ಕುರಿತಾಗಿ ನಮಗೆ ತಿಳಿಸಿ, ಅದನ್ನು ಸರಿಪಡಿಸುವತ್ತ ಬೇಕಾಗಿರುವ ಮಾಹಿತಿಯನ್ನು ಒದಗಿಸಿ.

೬. ಇಲ್ಲಿ ಸಂಗ್ರಹಿತ ಪ್ರಸಂಗಗಳು ಹೆಚ್ಚು ಹೆಚ್ಚಾಗಿ ಯಕ್ಷಪ್ರಸಂಗಕೋಶದಲ್ಲೂ ಬರುವತ್ತ ಯಕ್ಷಪ್ರಸಂಗಕೋಶದ ತಂಡದೊಂದಿಗೆ ಸಹಕರಿಸಿ.    

 ನಿಮ್ಮೆಲ್ಲರ ಉದಾರತೆ, ಸ್ವಯಂಸೇವೆ, ಸಹಾಯ, ಸಹಕಾರಗಳಿಗೆ ಸದಾ ಋಣಿಗಳಿದ್ದೇವೆ. 

                             ಯಕ್ಷಗಾನಂ ವಿಶ್ವಗಾನಂ

ವಂದನೆಗಳೊಂದಿಗೆ,
-    ಸಂಪಾದಕ ಮಂಡಳಿ, ಪ್ರಸಂಗಪ್ರತಿಸಂಗ್ರಹ ಯೋಜನೆ
- ವಿಶ್ವಸ್ಥರು, ಯಕ್ಷವಾಹಿನಿ ಪ್ರತಿಷ್ಟಾನ
ಸಂಪಾದಕ ಮಂಡಳಿ: ನಟರಾಜ ಉಪಾಧ್ಯ (9632824391), ಅಶ್ವಿನಿ ಹೊದಲ (9686112237)
ಗೌರವಾನ್ವಿತ ಸಲಹಾ ಮಂಡಳಿ: (ಅಕ್ಷರ ಅನುಕ್ರಮಣಿಕೆಯಲ್ಲಿ) ಅಗರಿ ಭಾಸ್ಕರ ರಾವ್‌, ಅಜಿತ್ ಕಾರಂತ್, ಅನಂತ ಪದ್ಮನಾಭ ಪಾಠಕ್, ಅವಿನಾಶ್ ಬೈಪಡಿತ್ತಾಯ, ಅಶೋಕ್ ಮುಂಗಳಿಮನೆ, ಇಟಗಿ ಮಹಾಬಲೇಶ್ವರ ಭಟ್, ಕಂದಾವರ ರಘುರಾಮ ಶೆಟ್ಟಿ, ಕಜೆ ಸುಬ್ರಹ್ಮಣ್ಯ ಭಟ್ ವೇಣೂರು, ಕದ್ರಿ ನವನೀತ ಶೆಟ್ಟಿ, ಕೃಷ್ಣಮೂರ್ತಿ ತುಂಗ, ಕೆರೆಮನೆ ಶಿವಾನಂದ ಹೆಗಡೆ, ಗಿಂಡೀಮನೆ ಮೃತ್ಯುಂಜಯ, ಡಾ. ಆನಂದರಾಮ ಉಪಾಧ್ಯ, ಡಾ. ಉಪ್ಪಂಗಳ ಶಂಕರನಾರಾಯಣ ಭಟ್ಟ, ಡಾ. ಪಾದೇಕಲ್ಲು ವಿಷ್ಣು ಭಟ್‌, ಡಾ. ಪ್ರಭಾಕರ ಜೋಷಿ, ಡಾ. ಮಮತಾ ಜಿ., ಡಾ. ರಾಧಾಕೃಷ್ಣ ಉರಾಳ, ಡಾ. ವಸಂತ ಭಾರದ್ವಾಜ ಕಬ್ಬಿನಾಲೆ, ಡಾ.ಪ್ರದೀಪ್ ಸಾಮಗ, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಡಿ. ಎಸ್. ಶ್ರೀಧರ, ದಿನೇಶ ಉಪ್ಪೂರ ಎಂ. ಎನ್., ನಾರಾಯಣ ಹೆಬ್ಬಾರ್, ಮಂಟಪ ಪ್ರಭಾಕರ ಉಪಾಧ್ಯ, ಮೋಹನ ಭಾಸ್ಕರ ರಾವ್‌, ಮೋಹನ ಹೊಳ್ಳ ಕಾರ್ಕಡ, ಪ್ರಸಾದ ಚೇರ್ಕಾಡಿ, ಭಾಸ್ಕರ ರೈ ಕುಕ್ಕುವಳ್ಳಿ, ಮಲ್ಪೆ ಲಕ್ಷ್ಮೀನಾರಾಯಣ ಸಾಮಗ, ಮಹೇಶ್ ಪದ್ಯಾಣ, ಮುರಳಿ ಕಡೆಕಾರ್‌, ರವಿ ಮಡೋಡಿ, ರಾಜಗೋಪಾಲ್ ಕನ್ಯಾನ ಕೆ. ಪಿ., . ನಾ. ಭಟ್, ವಿದುಷಿ ಸುಮಂಗಲಾ ರತ್ನಾಕರ್, ವಿದ್ಯಾಧರ ಹೆಗಡೆ ಕವಿತಾಸ್ಫೂರ್ತಿ, ಶಶಿರಾಜ ಸೋಮಯಾಜಿ, ಶಿವಕುಮಾರ ಬಿ. ಅಳಗೋಡು, ಶಿವಕುಮಾರ ಬೇಗಾರ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ (ಇನ್ನೂ ಅನೇಕ ಯಕ್ಷಲೋಕದ ಮಹನೀಯರನ್ನು ಇಲ್ಲಿ ಸೇರಿಸಲಿಕ್ಕಿದೆ.)
ಪ್ರಸಂಗಪ್ರತಿ ಒದಗಣೆ ಮತ್ತಿತರ ಸಹಕಾರ: ಅಂಬರೀಷ ಭಾರದ್ವಾಜ, ಅಗರಿ ಭಾಸ್ಕರ ರಾವ್, ಅಜಿತ್ ಕಾರಂತ್, ಅನಂತ ದಂತಳಿಕೆ, ಅಶೋಕ್ ಮುಂಗಳಿಮನೆ, ಇಟಗಿ ಮಹಾಬಲೇಶ್ವರ ಭಟ್, ಋಷ್ಯಶೃಂಗ ಭಟ್ ದೇವರಮನೆ, ಎ. ಎನ್. ಹೆಗಡೆ, ಎಂ. ಆರ್. ವಾಸುದೇವ ಸಾಮಗ, ಎಂ. ಆರ್. ಲಕ್ಷ್ಮೀನಾರಾಯಣ, ಎಸ್. ಎಮ್. ಹೆಗಡೆ, ಕಂದಾವರ ರಘುರಾಮ ಶೆಟ್ಟಿ, ಕಜೆ ಸುಬ್ರಹ್ಮಣ್ಯ ಭಟ್ ವೇಣೂರು, ಕರ್ನಾಟಕ ಯಕ್ಷಗಾನ ಅಕಾಡೆಮಿ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ  (ಕರ್ನಾಟಕ ಸರ್ಕಾರ), ಕಣಜಅಂತರಜಾಲ ಕನ್ನಡ ಜ್ಞಾನಕೋಶ: www.kanaja.in, ಗಣಪತಿ ಭಟ್‌, ಗಿಂಡೀಮನೆ ಮೃತ್ಯುಂಜಯ, ಗುರುನಂದನ್ ಹೊಸೂರು, ಗುರುರಾಜ ಹೊಳ್ಳ ಬಾಯಾರು, ಗೋಪಾಲಕೃಷ್ಣ ಭಾಗವತ್, ಡಾ. ಅಮೃತ ಸೋಮೇಶ್ವರ, ಡಾ. ಆನಂದರಾಮ ಉಪಾಧ್ಯ, ಡಾ. ರಾಧಾಕೃಷ್ಣ ಉರಾಳ, ಡಾ. ವಸಂತ ಭಾರದ್ವಾಜ ಕಬ್ಬಿನಾಲೆ, ಡಾ.ಪ್ರದೀಪ್ ಸಾಮಗ, ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಡಿ. ಎಸ್. ಶ್ರೀಧರ, ದಿನೇಶ ಉಪ್ಪೂರ ಎಮ್‌. ಎನ್., ದಿವಾಕರ ಹೆಗಡೆ ಕೆರೆಹೊಂಡ, ನಂದಳಿಕೆ ಬಾಲಚಂದ್ರ ರಾವ್, ನಾಗೇಶ ಅಣ್ವೇಕರ, ನಾರಾಯಣ ಯಾಜಿ, ನಾರಾಯಣ ಶಾನುಭಾಗ, ನಿತ್ಯಾನಂದ ಹೆಗಡೆ ಮೂರೂರು, ಪ್ರೊ. ಎಮ್.. ಹೆಗಡೆ, ಬಲಿಪ ನಾರಾಯಣ ಭಾಗವತ, ಮಧುಕುಮಾರ್ ಬೋಳೂರು, ಮನೋಹರ ಕುಂದರ್, ಮುರಳಿ ಶ್ರೇಣಿ, ಯಕ್ಷಕೋಶ ಟೆಲಿಗ್ರಾಮ್ಸಮೂಹ, ಯಕ್ಷಗಾನ ಕಲಾರ೦ಗ ಉಡುಪಿ, ಯಕ್ಷಸಿಂಚನ, ಬೆಂಗಳೂರು, ರಘುರಾಮ್ ಮುಳಿಯ, ರವಿ ಮಡೋಡಿ, ರವೀಂದ್ರ ಐತುಮನೆ, ರಾಜಗೋಪಾಲ್ ಕನ್ಯಾನ ಕೆ. ಪಿ., . ನಾ. ಭಟ್, ವಿದುಷಿ ಸುಮಂಗಲಾ ರತ್ನಾಕರ್, ವಸಂತಕೃಷ್ಣ ಪಟ್ಟಾಜೆ, ವಿದ್ಯಾಧರ ಹೆಗಡೆ ಕವಿತಾಸ್ಫೂರ್ತಿ, ಶಶಿರಾಜ ಸೋಮಯಾಜಿ, ಶಿವಕುಮಾರ ಬಿ. ಅಳಗೋಡು, ಶೇಷಗಿರಿಯಪ್ಪ, ಶ್ರೀನಿಧಿ ಡಿ. ಎಸ್.,‌ ಶ್ರೀಪಾದ ಗದ್ದೆ, ಸುರೇಶ್ ಹೆಗಡೆ ಬೆಳಸಲಿಗೆ, ಹರಿಕೃಷ್ಣ ಹೊಳ್ಳ ಬ್ರಹ್ಮಾವರ, ಹೊಸ್ತೋಟ ಮಂಜುನಾಥ ಭಾಗವತ (ಇನ್ನೂ ಅನೇಕ ಯಕ್ಷಲೋಕದ ಮಹನೀಯರನ್ನು ಇಲ್ಲಿ ಸೇರಿಸಲಿಕ್ಕಿದೆ.)
ಯಕ್ಷವಾಹಿನಿ ಸ೦ಸ್ಥೆ
ಗೌರವಾನ್ವಿತ ಸಲಹಾ ಮಂಡಳಿ: ಮಲ್ಪೆ ಲಕ್ಷ್ಮೀನಾರಾಯಣ ಸಾಮಗ (ಗೌರವಾಧ್ಯಕ್ಷರು), ಡಿ. ಎಸ್. ಶ್ರೀಧರ, ಗಿಂಡೀಮನೆ ಮೃತ್ಯುಂಜಯ, ದಿನೇಶ ಉಪ್ಪೂರ, ಡಾ. ಪ್ರದೀಪ ಸಾಮಗ, ರಾಜಗೋಪಾಲ ಕನ್ಯಾನ, ಶಶಿರಾಜ ಸೋಮಯಾಜಿ, ಅನಂತ ಪದ್ಮನಾಭ ಪಾಠಕ್, ವಿದುಷಿ ಸುಮ೦ಗಲಾ ರತ್ನಾಕರ್, ಹರಿಕೃಷ್ಣ ಹೊಳ್ಳ, ಕಜೆ ಸುಬ್ರಹ್ಮಣ್ಯ ಭಟ್, . ನಾ. ಭಟ್, ರಾಘವೇ೦ದ್ರ ಮಯ್ಯ (ಲೆಕ್ಕಪತ್ರ ಪರಿಶೋಧಕರು) 
ವಿಶ್ವಸ್ಥ ಮಂಡಳಿ ಮತ್ತು ಕಾರ್ಯಕಾರಿ ಮ೦ಡಳಿ: ಡಾ. ಆನಂದರಾಮ ಉಪಾಧ್ಯ (ಅಧ್ಯಕ್ಷ), ನಟರಾಜ ಉಪಾಧ್ಯ (ಕಾರ್ಯದರ್ಶಿ), ರವಿ ಮಡೋಡಿ (ಖಜಾಂಚಿ)
ಆರ್ಥಿಕ ಸಹಾಯ: ಅಶೋಕ್ ಕೊಡ್ಲಾಡಿ, ಗಿಂಡೀಮನೆ ಮೃತ್ಯುಂಜಯ, ನಟರಾಜ ಉಪಾಧ್ಯ
ಪುಸ್ತಕ ಸಹಾಯ: ವಿದುಷಿ ಸುಮಂಗಲ ರತ್ನಾಕರ್, ಮಂಟಪ ಪ್ರಭಾಕರ ಉಪಾಧ್ಯ, ಡಾ. ಆನಂದರಾಮ ಉಪಾಧ್ಯ, ಗಿಂಡೀಮನೆ ಮೃತ್ಯುಂಜಯ, ನಟರಾಜ ಉಪಾಧ್ಯ 
Share:

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ