೨೦೨೦ರ ಮಕರ ಸಂಕ್ರಾಂತಿಯ ಉಡುಗೊರೆಯಾಗಿ ಪ್ರಸಂಗಪ್ರತಿಸಂಗ್ರಹವನ್ನು ೮೦೦ ಪ್ರತಿಗಳ ಗಡಿ ದಾಟಿಸಲಾಗಿದೆ!


೨೦೨೦ರ ಮಕರ ಸಂಕ್ರಾಂತಿಯ ಉಡುಗೊರೆಯಾಗಿ ಪ್ರಸಂಗಪ್ರತಿಸಂಗ್ರಹವನ್ನು ೮೦೦ ಪ್ರತಿಗಳ ಗಡಿ ದಾಟಿಸಲಾಗಿದೆ. ನಮ್ಮ ಓದುಗರಿಗೆ ಸಂಕ್ರಾಂತಿಯ ಇಂದಿನ ಶುಭದಿನದಂದೇ ಸಿಹಿಸುದ್ದಿ ಕೊಡಬೇಕೆಂಬ ಹಟತೊಟ್ಟು ಸಹಸಂಪಾದಕರಾದ ಶ್ರೀಮತಿ ಅಶ್ವಿನಿ ಹೊದಲ ಅವರು ದಿನವಿಡೀ ಗಣಕಯಂತ್ರದ ಮುಂದೆ ಶ್ರಮಪಡುವ ಮೂಲಕ ಕಾಯಕದ ಕೈಲಾಸವನ್ನೇ ಇಲ್ಲಿಯ ತನಕ ಹಬ್ಬವನ್ನಾಗಿಸಿ  ಈಗ ತಾನೇ ಎಳ್ಳು ಬೀರಲು ಹೊರಟಿದ್ದಾರೆ.

ಇತ್ತೀಚಿನ ಜನವರಿ ೧೧ರ  ಪ್ರಸಂಗಪ್ರತಿ ಸ್ಕ್ಯಾನಿಂಗ್‌ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಸೇರಿದ್ದು ೮೦೦ರ ಗಡಿ ದಾಟಲು ಸಾಧ್ಯವಾಗಿದೆ. ಮುಂದೆ ಎಲ್ಲೆಲ್ಲಿ ನೂರಾರು ನಮ್ಮ ಸಂಗ್ರಹದಲ್ಲಿ ಇರದ ಪ್ರಸಂಗ ಪುಸ್ತಕಗಳು ಲಭ್ಯವೋ ಅಲ್ಲಲ್ಲಿ ಸ್ಕ್ಯಾನಿಂಗ್‌ ಕಮ್ಮಟಗಳನ್ನು ನಡೆಸುವ ಸ್ವಯಂಸೇವಕರು ಒಟ್ಟಾದರೆ, ತಿಂಗಳಿಗೆ ಒಂದು ಕಮ್ಮಟವಾದರೂ ನಡೆದು ನಾವು ೪,೦೦೦ ಪ್ರಸಂಗಪ್ರತಿಗಳ ಗುರಿಯತ್ತ ಬೇಗ ಸಾಗುವುದು ಸಾಧ್ಯ ಎನ್ನಿಸುತ್ತಿದೆ. 



ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 

ಹಳೆಯ ಕೃತಿಗಳ ಜೊತೆಗೆ ಸಮಕಾಲೀನ ಕೃತಿಗಳೂ ಸೇರುತ್ತಿವೆ. ಸಮಕಾಲೀನ ಕೃತಿಗಳ ಕುರಿತಾಗಿ ಅವುಗಳ ಕವಿ ಹಾಗೂ ಪ್ರಕಾಶಕರ ಒಪ್ಪಿಗೆ ನೇರವಾಗಿ ಇಲ್ಲಾ ಪರೋಕ್ಷವಾಗಿ ತೆಗೆದುಕೊಳ್ಳುತ್ತಿದ್ದೇವೆ. ಒಪ್ಪಿಗೆ ಸಿಗದಿದ್ದರೆ ಅವುಗಳನ್ನು ತಡೆ ಹಿಡಿದು, ಮುಂದೆ ಸಿಗಬಹುದೆಂಬ ಆಶಯದಲ್ಲಿ ಇದ್ದೇವೆ. ಇಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅಂತರಜಾಲದಲ್ಲಿ ಸ್ಕ್ಯಾನ್‌ ಆದ ಪ್ರತಿ ಸೇರಿದರೆ ಅವುಗಳ ಮುದ್ರಿತ ಪ್ರತಿಗಳ ಮಾರಾಟಕ್ಕೆ ಪೆಟ್ಟು ಬೀಳಬಹುದು. ಆದರೆ ಪ್ರಚಾರ ಮತ್ತು ಜನಪ್ರಿಯತೆ ವಿಚಾರದಲ್ಲಿ ಅಂತರಜಾಲ ಸ್ಕ್ಯಾನ್ ಪ್ರತಿಗಳು ಕವಿ ಮತ್ತು ಪ್ರಕಾಶಕರಿಗೆ ಹೆಚ್ಚಿನ ಖ್ಯಾತಿ, ಗೌರವ ಸಂದಾಯವನ್ನು ತರಬಹುದು. ಒಟ್ಟಿನಲ್ಲಿ, ಮುದ್ರಿತ ಪ್ರಸಂಗಪುಸ್ತಕಗಳ ಮಾರಾಟದಿಂದ ಹಣ ಮಾಡುವ ನಿರೀಕ್ಷೆ ಇಲ್ಲದವರು ನಮ್ಮೊಂದಿಗೆ ಕೂಡಲೇ ಸಹಕರಿಸುವುದು ಎಲ್ಲರೂ ಗೆಲ್ಲುವ ತಂತ್ರವೇ ಆಗಿದೆ. ಯಕ್ಷಗಾನದಿಂದ ಬದುಕು ಆಗುವವರ ಹೊಟ್ಟೆಯ ಮೇಲೆ ಪೆಟ್ಟು ನಮ್ಮಿಂದ ಆಗಬಾರದು ಎಂಬ ಕಳಕಳಿ ನಮ್ಮದು. ಅದರಲ್ಲೂ ಮುಖ್ಯವಾಗಿ ಹೆಚ್ಚಿನ ಮನ್ನಣೆಗೆ ಅರ್ಹರಾಗಿರುವ ಅದರಲ್ಲೂ ಸಮಕಾಲೀನರಾಗಿರುವ ಪ್ರಸಂಗಕವಿಗಳಿಗೆ ನಮ್ಮ ಯೋಜನೆಯಿಂದ ತೊಂದರೆ ಆಗಬಾರದು. ಆದುದರಿಂದ ಕವಿಗಳ ಮತ್ತು ಪ್ರಕಾಶಕರ ಪೂರ್ವ ಅನುಮತಿ ಅತೀ ಅವಶ್ಯ. ಈ ನಿಟ್ಟಿನಲ್ಲಿ   ಕವಿಗಳ ಮತ್ತು ಪ್ರಕಾಶಕರ ಖಚಿತವಾದ ಅನುಮತಿಗಳನ್ನು ಕೊಡಿಸುವಲ್ಲಿ ಅನೇಕ ಸ್ವಯಂಸೇವಕರ ಸಹಾಯ ನಮಗೆ ಬೇಕೇ ಬೇಕು. ಅಂತಹವರಲ್ಲಿ ನೀವೂ ಒಬ್ಬರಿರಬಹುದು, ದಯವಿಟ್ಟು ಯೋಚಿಸಿ.

ನಮಗೆ ಸಹಕರಿಸಲು ಹೊರಟಿರುವ ನಿಮ್ಮ ಸಮಯ ಮತ್ತು ಶಕ್ತಿಯು ಅಮೂಲ್ಯವಾದುದುಆ ನಿಟ್ಟಿನಲ್ಲಿ ಈ ಕೆಳಗಿನ ಅಂಶಗಳನ್ನು ಹಂಚಿಕೊಳ್ಳುತ್ತಿದ್ದೇವೆ.

1.   ತಮ್ಮಲ್ಲಿರುವ ಯಾ ತಮ್ಮ ವಲಯದಲ್ಲಿರುವವರ ಪ್ರಸಂಗಗಳ ಹೆಸರುಕವಿಪ್ರಕಾಶನ (ಹಸ್ತಪ್ರತಿಯೂ ನಮಗೆ ಪ್ರಕಾಶನದ ಲೆಕ್ಕವೇ) ಗಳ ವಿವರವನ್ನು ಪಟ್ಟಿಯಾಗಿ ನಮಗೆ ಕಳಿಸಿದಲ್ಲಿಈಗಾಗಲೇ ಸಂಗ್ರಹದಲ್ಲಿ ಇರುವ ಪ್ರತಿಗಳನ್ನು ಹೊರತುಪಡಿಸಿ ಬೇಕಾದ ಉಳಿದದ್ದನ್ನುಮಾತ್ರ ಸಂಗ್ರಹಕ್ಕೆ ಸೇರಿಸುವ ಭಾರ ಉಳಿಯುತ್ತದೆ. ಇಲ್ಲಿಯೂ ಕೂಡಾ ನಿಮ್ಮಲ್ಲಿರುವ ನಮಗೆ ಬೇಕಾದ ಪ್ರಸಂಗಗಳ ಪಟ್ಟಿ ಉದ್ದವಿದ್ದಾಗನೀವು ಕೊಡುವ ಮೊದಲೇ ನಮಗೆ ಸಿಕ್ಕರೆ ನಿಮ್ಮ ಕೆಲಸವನ್ನು ಉಳಿಸಬಹುದುಹಾಗಾಗಿಯೇ ಉದ್ದ ಪಟ್ಟಿಯಲ್ಲಿ ನೀವು ಈಗಲೇ ಸ್ಕ್ಯಾನ್‌ ಮಾಡಲು ಹೊರಟ ಪ್ರತಿಗಳ ಬಗ್ಗೆ ತಿಳಿಸಿಯೇ ಪ್ರಾರಂಭಿಸಿಕೊನೆಯ ನಿಮಿಷದ ಸೇರ್ಪಡೆ ಇದ್ದಾಗ ನಿಮ್ಮ ಕೆಲಸವನ್ನು ಅಲ್ಲಿ ಉಳಿಸುವುದು ನಮ್ಮ ಧರ್ಮ.

2.   ಸಮಕಾಲೀನ ಕವಿಗಳ ಪ್ರತಿಗಳಿದ್ದರೆನಮ್ಮ ಪರವಾಗಿ ನೀವೇ ಅವರ ಅನುಮತಿ ಕೊಡಿಸಿದರೆ ನಮಗೆ ಸುಲಭಇಲ್ಲದಿರೆ ಅವರ ಸಂಪರ್ಕ ವಿವರವಿದ್ದರೆ ಕೊಡಿಇಲ್ಲದಿರೆ ಸ್ಕ್ಯಾನ್‌ ಮಾಡಿ ಕಳುಹಿಸುವುದನ್ನು ನಿಲ್ಲಿಸಬೇಡಿ. ನಾವೇ ಕವಿಯ ಅನುಮತಿ ಪಡೆಯಲು ಪ್ರಯತ್ನಿಸುತ್ತೇವೆ. ಅನುಮತಿ ಸಿಗುವ ತನಕ ತಾವು ಕಳುಹಿಸಿದ ಸ್ಕ್ಯಾನ್‌ ಪ್ರತಿಗಳನ್ನುತಡೆಹಿಡಿದರೂ ಕ್ರಮೇಣ ಅವು ನಮ್ಮ ಸಂಗ್ರಹದಲ್ಲಿ ಸೇರಿ ನಿಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.  


3.   ಸ್ಕ್ಯಾನ್‌ ಮಾಡುವ ಮೊದಲು ಆ ಪ್ರಸಂಗವು ಈಗಾಗಲೇ ಪ್ರಸಂಗಪ್ರತಿ ಸಂಗ್ರಹದಲ್ಲಿ ಲಭ್ಯವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ಮುಂದುವರೆಯಿರಿಆ ಕುರಿತು ನಿಮಗೆ ಕೋಷ್ಟಕದಲ್ಲಿ ಹುಡುಕುವುದು ಕಷ್ಟವೆನಿಸಿದರೆ ನಮ್ಮನ್ನುಕೇಳಿಖಚಿತಪಡಿಸುತ್ತೇವೆ.


4.   ಪ್ರತಿಗಳನ್ನು ಸ್ಕ್ಯಾನ್‌ ಮಾಡಲು ಕ್ಯಾಮ್‌ ಸ್ಕ್ಯಾನ್‌ (CamScan) ಎಂಬ ತಂತ್ರಾಂಶವನ್ನು ಪ್ಲೇಸ್ಟೋರ್‌ ನ ಮೂಲಕ ಮೊಬೈಲ್ಗೆ ಇಳಿಸಿಕೊಂಡು ಉಪಯೋಗಿಸಬಹುದು.


5.   ಪ್ರತಿಯ ಮುಖಪುಟದಿಂದ ಪ್ರಾರಂಭಿಸಿ ಕೊನೆಯ ರಕ್ಷಾಪುಟದವರೆಗೆ ಸ್ಕ್ಯಾನ್‌ ಇರಲಿಹಿಂದೆ ಆಗಿ ಹೋದ ಪ್ರಕಾಶನಕ್ಕೆ ಪೂರ್ಣ ನ್ಯಾಯಕೊಡುವುದು ನಮ್ಮ ಧರ್ಮ.


6.   ಸ್ಕ್ಯಾನ್‌ ಮಾಡುವಾಗ ಪುಟದ ಅಂಚುಗಳು ಕತ್ತರಿಸಿಹೋಗಿಲ್ಲ ಎಂಬುದನ್ನು ಗಮನಿಸಿಎರಡು ಎದುರು ಪುಟಗಳ ನಡುವಿನ ಅಕ್ಷರಗಳು ನುಂಗಿ ಹೋಗಿಲ್ಲ ಎಂಬುದನ್ನೂ ಖಾತ್ರಿ ಮಾಡಿಕೊಳ್ಳಿರಿ.

7.   ಪುಟಗಳು ಮತ್ತು ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ಸ್ಕ್ಯಾನ್‌ ಇರಲಿಇದಕ್ಕಾಗಿ ಕ್ಯಾಮೆರಾದ ಸ್ಕ್ರೀನನ್ನು ಒಮ್ಮೆ ಒತ್ತಿ ಫೋಕಸ್‌ ಮಾಡಿಕೊಳ್ಳಬೇಕಾಗಬಹುದು.  ಒಳ್ಳೇ ನೈಸರ್ಗಿಕ ಬೆಳಕಿನಲ್ಲಿ ಫ್ಲಾಷ್‌ ಇಲ್ಲದೇ ತೆಗೆದ ಸ್ಕ್ಯಾನ್‌ ಪ್ರತಿ ಓದಲು ಸ್ಪಷ್ಟವಿರುತ್ತದೆ.


8.   ಪುಟಗಳು ಓರೆಕೋರೆಯಾಗಿರದೆ ನೇರವಾಗಿರಲಿಸಣ್ಣ ಮಟ್ಟದ ಓರೆಕೋರೆಗಳನ್ನು ಕ್ಯಾಮ್‌ ಸ್ಕ್ಯಾನ್‌ ತಾನೇ ಸರಿಪಡಿಸುತ್ತದೆ. ಕೆಲವೊಮ್ಮೆ ಸ್ಕ್ಯಾನ್‌ ಆದ ನಂತರ ಕ್ಯಾಮ್ಸ್ಕ್ಯಾನ್‌ ಪೂರ್ಣ ಪುಟವನ್ನು ಆರಿಸಿಕೊಂಡಂತೆ ತೋರಿಸದೇ ಇದ್ದಾಗನೀವು ಅದು ಹಾಕಿದ ಗೆರೆಗಳನ್ನು ತಿದ್ದಿ ಪೂರ್ಣ ಪುಟಕ್ಕೆ ವಿಸ್ತರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅದು ಹಾಕಿಕೊಟ್ಟ ಗೆರೆಯನ್ನು ಮಧ್ಯದಲ್ಲಿ ದೂಕಿದರೆ ಇಡೀ ಗೆರೆಯೇ ನಿಮಗೆ ಬೇಕಾದಂತೆ ಚಲಿಸುತ್ತದೆಮೂಲೆಯಿಂದ ತಳ್ಳಿದರೆ ಮೂಲೆ ಮಾತ್ರ ಚಲಿಸುತ್ತದೆ. ನಿಮಗೆ ಬೇಕಾದಂತೆ ಚಲನೆಯ ಕ್ರಮವನ್ನು ಆಯ್ದುಕೊಳ್ಳಿ.

9.   ಅಕ್ಕಪಕ್ಕದ ಪುಟಗಳನ್ನು ಒಂದೊಂದಾಗಿ ಸ್ಕ್ಯಾನ್‌ ಮಾಡುವುದರ ಬದಲಾಗಿ ಎರಡೂ ಒಂದೇ ಪುಟದಲ್ಲಿ ಬರುವಂತೆ ಮಾಡಿದರೆ ಸಮಯ ಮತ್ತು ಫೈಲ್ನ ಗಾತ್ರ ಎರಡನ್ನೂ ಕಡಿಮೆ ಮಾಡಬಹುದುಮುಖ್ಯವಾಗಿ ಎಲ್ಲಾ ಅಕ್ಷರಗಳು ಓದುವಂತಿರಬೇಕು.

10.    ಸ್ಕ್ಯಾನ್‌ ಕಾರ್ಯ ಮುಗಿದ ನಂತರ ಯಾವುದೇ ಪುಟ ಬಿಟ್ಟುಹೋಗಿಲ್ಲ ಎಂಬುದನ್ನು ಮತ್ತೊಮ್ಮೆ ಗಮನಿಸಿ.


11.    ಸ್ಕ್ಯಾನ್‌ ಮಾಡಿದ ಪ್ರತಿಗಳನ್ನು ಮೈಲ್‌ ಅಥವಾ ವಾಟ್ಸ್ಯಾಪ್‌ ಮೂಲಕ ನಮಗೆ ಕಳಿಸಿ ಕೊಡಿಒಂದು ಪುಸ್ತಕದ ಎಲ್ಲಾ ಪುಟಗಳನ್ನು ಸ್ಕ್ಯಾನ್‌ ಮಾಡಿದ ನಂತರ “Share” ಮಾಡ ಹೊರಟಾಗ ಪಿಡಿಎಫ್ ಸ್ವರೂಪವನ್ನು ಆಯ್ದುಕೊಂಡು ನಮ್ಮ ಈಮೈಲಿಗೆ ಇಲ್ಲಾ ವಾಟ್ಸ್ಯಾಪ್‌ ಸಂಖ್ಯೆಗೆ ಕಳುಹಿಸಿ.

12.    ನೀವು ಮಾಡಿದ ಸ್ಕ್ಯಾನ್‌ ನಲ್ಲಿ ತಪ್ಪುಗಳಿದ್ದರೆ ನಾವು ನಿಮ್ಮ ಗಮನಕ್ಕೆ ತರುತ್ತೇವೆಆಗ ನೀವು ಸರಿಯಿಲ್ಲದ ಪೇಜುಗಳನ್ನು ಮತ್ತೆ ಸ್ಕ್ಯಾನ್‌ ಮಾಡಿಕೊಡಬೇಕಾಗಿ ಕೇಳುತ್ತೇವೆ. ಪುಸ್ತಕ ದಪ್ಪವಿದ್ದರೆ ಪುಸ್ತಕದ ಮಧ್ಯದ ಅಕ್ಷರಗಳು ಮಡಿಕೆಯಲ್ಲಿ ಮುಚ್ಚಿ ಹೋಗುವ ಅಪಾಯ ಇರುವುದರಿಂದ ಪುಸ್ತಕವನ್ನು ಬೇಕಾದ ಹಾಗೆ ಒತ್ತಿ ಒಂದು ಕೋನದಲ್ಲಿ ಹಿಡಿದುಕೊಳ್ಳಲು ಇನ್ನೊಬ್ಬರ ಸಹಾಯ ಬೇಕಾಗುತ್ತದೆ.

13. ನಿಮ್ಮ ಆಪ್ತರಲ್ಲಿ / ಸ್ನೇಹಿತರಲ್ಲಿ ಹಳೆಯ ಪ್ರತಿಗಳು ಇದ್ದು ಅದನ್ನು ನಮಗೆ ತಲುಪಿಸುವಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿರೆಅವರ ಅನುಮತಿಯಂತೆ ಅವರ ಸಂಪರ್ಕವನ್ನು ನಮಗೆ ದಯವಿಟ್ಟು ಕೊಡಿ.

14.    ನಿಮಗೆ ಕ್ಯಾಮ್ಸ್ಕ್ಯಾನ್‌ ಉಪಯೋಗಿಸಿದ ಅನುಭವ ಇಲ್ಲದಿರೆ ಅದನ್ನು ಕಲಿಯುವುದು ಸುಲಭವಿದೆ. ತಿಳಿದಿವರ ಹತ್ತಿರ ೫ ನಿಮಿಷಗಳಲ್ಲಿ ತೋರಿಸಿಕೊಂಡು ಕಲಿಯಿರಿ ಇಲ್ಲವೇ ಯೂಟ್ಯೂಬಿನಲ್ಲಿ ಈ ಸಂಬಂಧಿ ವಿಡಿಯೋಗಳನ್ನು ನೋಡಿ ಕಲಿಯಿರಿ. ಉದಾ: https://www.youtube.com/watch?v=LUQDCUl1L4g

ನಿಮ್ಮ ಸ್ವಯಂಸೇವೆಯ ಸಹಾಯವನ್ನೇ ನಂಬಿಕೊಂಡಿದ್ದೇವೆ.

ಸಂಪಾದಕ ಮಂಡಳಿ ಪ್ರಸಂಗಪ್ರತಿಸಂಗ್ರಹ ಯೋಜನೆ

ವಿಶ್ವಸ್ಥರುಯಕ್ಷವಾಹಿನಿ ಪ್ರತಿಷ್ಠಾನ


ಸಂಪರ್ಕ ವಿವರ:

ಈಮೈಲ್‌ : prasangaprathisangraha@gmail.com

ಮೊಬೈಲ್:‌ ನಟರಾಜ ಉಪಾಧ್ಯ – 9632824391 ಅಶ್ವಿನಿ ಹೊದಲ - 9686112237
Share:

ಜನವರಿ ೧೧, ೨೦೨೦: ಮತ್ತೆ ಸುಮಾರು ೭೦ ಪ್ರಸಂಗಗಳ ಸ್ಕ್ಯಾನ್‌ ಆಗಿ ಮೂರನೇ ಸಾಮೂಹಿಕ ಪ್ರಸಂಗ ಸ್ಕ್ಯಾನ್‌ ಕಮ್ಮಟ ಸಂಪನ್ನ


ಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೭೦ ಪ್ರಸಂಗಗಳ ಸ್ಕ್ಯಾನ್‌ ಒಮ್ಮೆಲೇ ಆಗಿಹೋಗುವ ಮೂಲಕ ಮೂರನೇ ಪ್ರಸಂಗ ಸ್ಕ್ಯಾನ್‌ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.

 ವಸಂತಕೃಷ್ಣರ ಮನೆಯಲ್ಲಿ ನಡೆದ ಈ ಕಮ್ಮಟದಲ್ಲಿ ವಸಂತಕೃಷ್ಣರ ತಂದೆ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಉಳಿದ ಪ್ರಸಂಗ ಪುಸ್ತಕಗಳು, ಲ. ನಾ. ಭಟ್ಟರ ಉಳಿದ ಪ್ರಸಂಗ ಪುಸ್ತಕಗಳು, ಹಾಗೂ ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿ ಸಂಗ್ರಹದ ಕೆಲವೇ ಪುಸ್ತಕಗಳು  ಸ್ಕ್ಯಾನ್‌ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳ ಸ್ಕ್ಯಾನ್‌ ಮುಗಿಸಲು ಮುಂದಿನ ಕಮ್ಮಟವೇ ಬೇಕಾಗಬಹುದು.

ಈ ಕಮ್ಮಟದಲ್ಲಿ ಸ್ಕ್ಯಾನ್‌ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ  ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಒಟ್ಟು ಸಂಗ್ರಹವು ೮೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ. 




ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 


ವಸಂತಕೃಷ್ಣರು ಹಾಗೂ ಅವರ ಸಹ-ಸಹೋದರ ಕಿಶೋರ್‌ ಹತ್ತು ಘಂಟೆಗೆ ಕಾಯಕವನ್ನು ಶುರು ಮಾಡಿದರು. ಹನ್ನೊಂದು ಘಂಟೆಗೆ ನಟರಾಜ ಉಪಾಧ್ಯ ಹಾಗೂ ಅಶ್ವಿನಿ ಹೊದಲ ಸೇರಿಕೊಂಡರು. ಒಂದೂವರೆ ಘಂಟೆಗೆ ರವಿ ಮಡೋಡಿ ಸೇರಿಕೊಂಡರು.

ವಸಂತಕೃಷ್ಣರ ಹೆಂಡತಿ ವಾತ್ಸಲ್ಯ ಹಾಗೂ ಅವರ ತಾಯಿ ಸೇರಿದ ಅಡಿಗೆಗಳನ್ನು ಪೊಗಸಾಗಿ ಉಂಡು ಮಧ್ಯಾಹ್ನದ ಕಾಯಕಕ್ಕೆ ಕಳೆ ಏರಿತು. ಪತ್ರೊಡೆ, ಪಲಾವ್‌, ತಂಬುಳಿ, ಮಜ್ಜಿಗೆ ಹುಳಿ, ಸಿಹಿತಿಂಡಿಗಳು, ಸಾರು, ಇತ್ಯಾದಿಗಳನ್ನು ಸವಿದೆದ್ದೆವು.


ಮಧ್ಯಾಹ್ನ ಕೆಲಸ ಮಾಡುತ್ತಲೇ ಮುಂದಿನ ಯೋಜನೆಗಳ ಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಿದೆವು.

ಸಾಕಷ್ಟು ಕಾಫಿ, ತಿಂಡಿಗಳನ್ನು ಮೆಲ್ಲುತ್ತಾ ಸುಮಾರು ೬ ಘಂಟೆಯಾಗುವ ತನಕ ಕಾಯಕ ನಡೆಸಿ ಮೊದಲ ಬಾರಿಗೆ ಕಮ್ಮಟದಲ್ಲಿ  ೭೦ ಪ್ರಸಂಗಗಳ ಸ್ಕ್ಯಾನ್‌ ಆಗುವ ಹೊಸ ದಾಖಲೆಯನ್ನು ಸ್ಥಾಪಿಸಿದೆವು.

ದಿನವಿಡೀ ವಸಂತಕೃಷ್ಣ ಹಾಗೂ ವಾತ್ಸಲ್ಯರ ವರವಾಗಿರುವ ವಾರುಣಿಯ ಎಂದಿನ ಆಟಗಳಿಗೆ ಧಕ್ಕೆ ಇದ್ದರೂ ಕಮ್ಮಟಕ್ಕೆ ತೊಂದರೆಯಾಗದಂತೆ ನಲಿದು ರಂಜಿಸಿದಳು.

ಫೆಬ್ರವರಿಯಲ್ಲಿ ಬೆಂಗಳೂರಲ್ಲೇ ಇನ್ನೊಂದು ಇದೇ ರೀತಿಯ ಕಮ್ಮಟವಾಗಬೇಕಿದೆ, ಈ ಕುರಿತಾದ ಹೇಳಿಕೆಯನ್ನು ನಿರೀಕ್ಷಿಸಿರಿ.

ಈ ಕಮ್ಮಟದಲ್ಲಿ ಪಾಲುಗೊಂಡು ಬೇರೆ ಬೇರೆ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ ಸಂಸ್ಥೆಯ ಪರವಾಗಿ ವಂದಿಸುವ.

ನಟರಾಜ ಉಪಾಧ್ಯ



Share:

ಮೂರನೇ ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟಕ್ಕೆ ನಿಮಗೆ ಸವಿನಯ ಆಮಂತ್ರಣ!

ಮುಂದಿನ ಕಮ್ಮಟದಲ್ಲಿ ಸ್ಕ್ಯಾನ್‌ ಆಗಲು ತವಕದಲ್ಲಿರುವ ಪ್ರಸಂಗ ಪುಸ್ತಕಗಳಲ್ಲಿ ಕೆಲವು.
ಪ್ರಸಂಗಪ್ರತಿ  ಸಂಗ್ರಹ ಯೋಜನೆಯಡಿ  ನಮ್ಮ ಸಂಗ್ರಹವು ೭೦೦ ಪ್ರತಿಗಳ ಗಡಿ ದಾಟಿ ೮೦೦ರತ್ತ ದಾಪುಗಾಲು ಇಡುತ್ತಿದೆ.  ಆದರೆ ಸುಮಾರು ೪,೦೦೦ ಪ್ರತಿಗಳ ದೂರದ ಗುರಿ ಮುಟ್ಟಬೇಕಾದರೆ ನಮ್ಮ ಸ್ವಯಂಸೇವೆಯ ಒಗ್ಗಟ್ಟಿನ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ. ಈ ಪ್ರಯುಕ್ತ ಮೂರನೇ  ಸಾಮೂಹಿಕ ಪ್ರಸಂಗ ಸ್ಕ್ಯಾನಿಂಗ್ ಕಮ್ಮಟ” ವನ್ನು ಇದೇ ಶನಿವಾರ, ಜನವರಿ ೧೧, ೨೦೨೦ರಂದು ನಡೆಸುತ್ತಿದ್ದೇವೆ.   

ನಿಮ್ಮೊಂದಿಗಿರುವ ಸ್ಪಷ್ಟವಾಗಿ ಸ್ಕ್ಯಾನ್ ಮಾಡಬಲ್ಲ  ಸ್ಮಾರ್ಟ್ ಫೋನುಗಳೇ ಪರಿಣಾಮಕಾರಿ ಆಯುಧಗಳಾಗಿ ಸಹಕರಿಸಲಿವೆ.  ಯಕ್ಷಪ್ರೇಮಿ ಸ್ವಯಂಸೇವಕರೆಲ್ಲಾ ಅಂದು ನಮ್ಮೊಂದಿಗೆ ಕೆಲವು ಗಂಟೆಗಳ ಕಾಲ ಸೇರಿ ಸಹಕರಿಸಿ.  ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫ ರ ತನಕ ನಡೆಯುವ ಈ ಕಮ್ಮಟದಲ್ಲಿ ಭಾಗವಹಿಸುವವರಿಗೆ ಊಟ, ತಿಂಡಿ, ಕಾಫಿ / ಚಾಗಳ ವ್ಯವಸ್ಥೆ ಇರುತ್ತದೆ. ಕೆಲಸದ ಜೊತೆಗೆ ಯಕ್ಷಗಾನದ ವಾತಾವರಣ ಸೃಷ್ಟಿಸಿಕೊಂಡು ಸ್ವಲ್ಪ ಗಮ್ಮತ್ತು ಕೂಡಾ ಮಾಡೋಣ!

ಯಾವತ್ತು: ಇದೇ ಶನಿವಾರಜನವರಿ ೧೧ನೇ ತಾರೀಖು೨೦೨೦
ಯಾವಾಗ: ಬೆಳಿಗ್ಗೆ ೧೦ ಘಂಟೆಯಿಂದ ಮಧ್ಯಾಹ್ನ  ೫ ಘಂಟೆಯ ತನಕ, ಶಕ್ತಿ ಉಳಿದವರಿಗೆ ಆರು ಘಂಟೆಯ ತನಕ ಎಳೆಯೋಣ 
ಎಲ್ಲಿ: ರಾಜರಾಜೇಶ್ವರಿ ನಗರದ ವಸಂತಕೃಷ್ಣ ಭಟ್‌ ಪಟ್ಟಾಜೆ ಅವರ ಮನೆ
FF23C
Sai Nandana Apartment
Hemmigepura Ward 198, RR Nagar, Bengaluru, Karnataka 560098

ಸ್ಥಳ ನಕ್ಷೆFF23C Sai Nandana Apartment

ನೀವು ಬರುವುದನ್ನು ಮೊದಲೇ ತಿಳಿಸಿ ಖಾತ್ರಿಗೊಳಿಸಿ.  ದೂರವಾಣಿ: 98806 75034

ನೀವು ಹೊರಡುವ ಮುನ್ನ: ಈವರೆಗೆ ಸ್ಕ್ಯಾನ್ ಆಗದ ನಿಮ್ಮಲ್ಲಿರುವ ಅಪರೂಪದ ಪ್ರಸಂಗ ಪುಸ್ತಕಗಳಿದ್ದರೆ ಅವುಗಳನ್ನು ಹೊತ್ತು ತನ್ನಿ. ಸ್ಮಾರ್ಟ್ ಫೋನ್ಚಾರ್ಜರ್ಪವರ್ ಬ್ಯಾಂಕುಗಳನ್ನು ಹಿಡಿದುಕೊಂಡೇ ಬನ್ನಿ.

ಯಕ್ಷಗಾನಕ್ಕಾಗಿ ನಿಮ್ಮ ಅಳಿಲು ಸೇವೆಗೆ  ಇದೊಂದು ಅಪೂರ್ವ ಅವಕಾಶ!

ನಿಮ್ಮ ಸಹಕಾರಕ್ಕೆ ವಂದಿಸುವ,

- ನಟರಾಜ ಉಪಾಧ್ಯ, ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ (ರಿ) ಸಂಸ್ಥೆಯ ಪರವಾಗಿ
- ವಸಂತಕೃಷ್ಣ ಭಟ್‌ ಪಟ್ಟಾಜೆ, ಅಂದು ನಿಮ್ಮನ್ನು ಸ್ವಾಗತಿಸುವ ಅತಿಥೇಯರು




ಪ್ರಸಂಗಪ್ರತಿಸಂಗ್ರಹ  ಆಂಡ್ರೋಯ್ಡ್ ಆಪ್ ನ ಕೊಂಡಿ : 

Share:

ಹೆಚ್ಚು ವೀಕ್ಷಣೆಯಾದವು

Powered by Blogger.

ಹೊಸತು..

ನೀವೂ ಪಾಲ್ಗೊಳ್ಳಿ

  • ನಮ್ಮ ಯೋಜನೆಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಳ್ಳಿ
  • ನಿಮ್ಮ ಅಮೂಲ್ಯ ಸಂಗ್ರಹಗಳನ್ನು ಡಿಜಿಟಲೀಕರಣಗೊಳಿಸುವುದಕ್ಕಾಗಿ ನಮ್ಮನ್ನು ಸಂಪರ್ಕಿಸಿ
  • ತಾಂತ್ರಿಕ ಪರಿಣತಿ, ಕಂಪ್ಯೂಟರ್ ಬೆರಳಚ್ಚು ಪರಿಣತಿ, ಪ್ರತಿ ಪರಿಶೀಲನೆ ಇತ್ಯಾದಿ ಕುಶಲತೆಯಿದ್ದ ಯಕ್ಷಗಾನಾಸಕ್ತರು ನಮ್ಮ ಯೋಜನೆಗಳಲ್ಲಿ ಕೈಜೋಡಿಸಬಹುದು
  • ಸಂಪರ್ಕ ಆಯ್ಕೆಯ ಮೂಲಕ ನಮಗೊಂದು ಸಂದೇಶ ಕಳುಹಿಸಿ