ಬರೇ ೫ ಜನರ ಸ್ವಯಂಸೇವೆ ಸಿಕ್ಕರೂ ಸುಮಾರು ೭೦ ಪ್ರಸಂಗಗಳ ಸ್ಕ್ಯಾನ್ ಒಮ್ಮೆಲೇ ಆಗಿಹೋಗುವ ಮೂಲಕ ಮೂರನೇ ಪ್ರಸಂಗ ಸ್ಕ್ಯಾನ್ ಕಮ್ಮಟವು ಫಲಕಾರಿಯಾಗಿ ಸಂಪನ್ನವಾಯಿತು.
ವಸಂತಕೃಷ್ಣರ ಮನೆಯಲ್ಲಿ ನಡೆದ ಈ ಕಮ್ಮಟದಲ್ಲಿ ವಸಂತಕೃಷ್ಣರ ತಂದೆ ಡಾ. ಪಟ್ಟಾಜೆ ಗಣೇಶ ಭಟ್ಟರ ಸಂಗ್ರಹದ ಉಳಿದ ಪ್ರಸಂಗ ಪುಸ್ತಕಗಳು, ಲ. ನಾ. ಭಟ್ಟರ ಉಳಿದ ಪ್ರಸಂಗ ಪುಸ್ತಕಗಳು, ಹಾಗೂ ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿ ಸಂಗ್ರಹದ ಕೆಲವೇ ಪುಸ್ತಕಗಳು ಸ್ಕ್ಯಾನ್ ಆದವು. ಡಾ. ಆನಂದರಾಮ ಉಪಾಧ್ಯ ಹಾಗೂ ರವಿ ಮಡೋಡಿಯವರ ಸಂಗ್ರಹದ ಪ್ರಸಂಗ ಪುಸ್ತಿಕೆಗಳ ಸ್ಕ್ಯಾನ್ ಮುಗಿಸಲು ಮುಂದಿನ ಕಮ್ಮಟವೇ ಬೇಕಾಗಬಹುದು.
ಈ ಕಮ್ಮಟದಲ್ಲಿ ಸ್ಕ್ಯಾನ್ ಆದ ಪ್ರಸಂಗಗಳು ಇನ್ನೊಂದು ವಾರದಲ್ಲೇ ಒಪ್ಪಗೊಂಡು ನಮ್ಮ ಸಂಗ್ರಹದಲ್ಲಿ ಸೇರಿ ಒಟ್ಟು ಸಂಗ್ರಹವು ೮೦೦ರ ಗಡಿ ದಾಟುವ ಶುಭ ಸಮಾಚಾರವನ್ನು ನಿರೀಕ್ಷಿಸಿರಿ.
ಪ್ರಸಂಗಪ್ರತಿಸಂಗ್ರಹ ಆಂಡ್ರೋಯ್ಡ್ ಆಪ್ ನ ಕೊಂಡಿ :
ವಸಂತಕೃಷ್ಣರು ಹಾಗೂ ಅವರ ಸಹ-ಸಹೋದರ ಕಿಶೋರ್ ಹತ್ತು ಘಂಟೆಗೆ ಕಾಯಕವನ್ನು ಶುರು ಮಾಡಿದರು. ಹನ್ನೊಂದು ಘಂಟೆಗೆ ನಟರಾಜ ಉಪಾಧ್ಯ ಹಾಗೂ ಅಶ್ವಿನಿ ಹೊದಲ ಸೇರಿಕೊಂಡರು. ಒಂದೂವರೆ ಘಂಟೆಗೆ ರವಿ ಮಡೋಡಿ ಸೇರಿಕೊಂಡರು.
ವಸಂತಕೃಷ್ಣರ ಹೆಂಡತಿ ವಾತ್ಸಲ್ಯ ಹಾಗೂ ಅವರ ತಾಯಿ ಸೇರಿದ ಅಡಿಗೆಗಳನ್ನು ಪೊಗಸಾಗಿ ಉಂಡು ಮಧ್ಯಾಹ್ನದ ಕಾಯಕಕ್ಕೆ ಕಳೆ ಏರಿತು. ಪತ್ರೊಡೆ, ಪಲಾವ್, ತಂಬುಳಿ, ಮಜ್ಜಿಗೆ ಹುಳಿ, ಸಿಹಿತಿಂಡಿಗಳು, ಸಾರು, ಇತ್ಯಾದಿಗಳನ್ನು ಸವಿದೆದ್ದೆವು.
ಮಧ್ಯಾಹ್ನ ಕೆಲಸ ಮಾಡುತ್ತಲೇ ಮುಂದಿನ ಯೋಜನೆಗಳ ಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಿದೆವು.
ಸಾಕಷ್ಟು ಕಾಫಿ, ತಿಂಡಿಗಳನ್ನು ಮೆಲ್ಲುತ್ತಾ ಸುಮಾರು ೬ ಘಂಟೆಯಾಗುವ ತನಕ ಕಾಯಕ ನಡೆಸಿ ಮೊದಲ ಬಾರಿಗೆ ಕಮ್ಮಟದಲ್ಲಿ ೭೦ ಪ್ರಸಂಗಗಳ ಸ್ಕ್ಯಾನ್ ಆಗುವ ಹೊಸ ದಾಖಲೆಯನ್ನು ಸ್ಥಾಪಿಸಿದೆವು.
ದಿನವಿಡೀ ವಸಂತಕೃಷ್ಣ ಹಾಗೂ ವಾತ್ಸಲ್ಯರ ವರವಾಗಿರುವ ವಾರುಣಿಯ ಎಂದಿನ ಆಟಗಳಿಗೆ ಧಕ್ಕೆ ಇದ್ದರೂ ಕಮ್ಮಟಕ್ಕೆ ತೊಂದರೆಯಾಗದಂತೆ ನಲಿದು ರಂಜಿಸಿದಳು.
ಫೆಬ್ರವರಿಯಲ್ಲಿ ಬೆಂಗಳೂರಲ್ಲೇ ಇನ್ನೊಂದು ಇದೇ ರೀತಿಯ ಕಮ್ಮಟವಾಗಬೇಕಿದೆ, ಈ ಕುರಿತಾದ ಹೇಳಿಕೆಯನ್ನು ನಿರೀಕ್ಷಿಸಿರಿ.
ಈ ಕಮ್ಮಟದಲ್ಲಿ ಪಾಲುಗೊಂಡು ಬೇರೆ ಬೇರೆ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಪ್ರಸಂಗಪ್ರತಿಸಂಗ್ರಹ ಯೋಜನೆ ಹಾಗೂ ಯಕ್ಷವಾಹಿನಿ ಸಂಸ್ಥೆಯ ಪರವಾಗಿ ವಂದಿಸುವ.
ನಟರಾಜ ಉಪಾಧ್ಯ
Very nice initiative..Shubhamastu.
ReplyDeleteYakshapremi B R Narayana Bhat.
Great going team
ReplyDelete